ವರ್ನರ್, ಏಬ್ರಹಾಮ್ ಗಾಟ್ಲಾಬ್
	1750-1817. ಜರ್ಮನಿಯ ಭೂವಿಜ್ಞಾನಿ. ಪೋಲೆಂಡಿನ ಬೋಲೆಸ್ಲಾವಿಕ್ ಸಮೀಪದ ವೆಹ್ರೂ ಎಂಬಲ್ಲಿ 1750 ಸೆಪ್ಟಂಬರ್ 25ರಂದು ಜನಿಸಿದ. ವೆಹ್ರೂ ಸಮೀಪದಲ್ಲಿಯ ಸ್ಯಾಕ್ಸನ್ ಪ್ರಾಂತ್ಯ ಗಣಿಗಾರಿಕೆಗೆ ಹೆಸರುವಾಸಿಯಾಗಿತ್ತು. ಈತನ ವಂಶದವರು ಅಲ್ಲಿಯ ಗಣಿಗಳಲ್ಲಿ ಉನ್ನತ ಅಧಿಕಾರದಲ್ಲಿದ್ದವರು. ಇವನ ತಂದೆ ವೆಹ್ರೂವಿನ ಕಬ್ಬಿಣದ ಕಾರ್ಖಾನೆಯಲ್ಲಿ ಅಧಿಕಾರಿಯಾಗಿದ್ದ. ಹೀಗಾಗಿ ಚಿಕ್ಕಂದಿನಲ್ಲಿ ಈತ ಅಡ್ಡಾಡಿದೆಡೆಯಲ್ಲೆಲ್ಲ ಗಣಿಗಳಿಂದ ಹೊರ ತೆಗೆದ ಅದುರು ರಾಶಿಗಳೇ ಇದ್ದು ಅವು ಇವನ ಕುತೂಹಲವನ್ನು ಕೆರಳಿಸುತ್ತಿದ್ದವು. ಇದಲ್ಲದೆ ತಂದೆಯೂ ಗಣಿಕೆಲಸದ ವಿಷಯವನ್ನು ಆಗಾಗ್ಗೆ ಮಗನಿಗೆ ಸ್ವಾರಸ್ಯವಾಗಿ ವಿವರಿಸುತ್ತ ಬಾಲಕನಲ್ಲಿ ಮೂಡಿದ್ದ ಖನಿಜಗಳ ಬಗೆಗಿನ ಒಲವನ್ನು ಉದ್ದೀಪನಗೊಳಿಸಲು ನೆರವಾದ. ಈತನೂ ತನ್ನ ಅಲೆದಾಟದಲ್ಲಿ ಹಲವಾರು ಖನಿಜಗಳನ್ನು ಸಂಗ್ರಹಿಸಿ ಅವುಗಳ ಬಗ್ಗೆ ವಿಶೇಷ ಆಸಕ್ತಿ ತಾಳುತ್ತಿದ್ದ.

	ಹದಿನೈದನೆಯ ವಯಸ್ಸಿನಲ್ಲಿ ಈತ ವೆಹ್ರೂನಲ್ಲಿಯ ಕಾರ್ಖಾನೆ ಯಲ್ಲಿ ತಂದೆಗೆ ಸಹಾಯಕನಾಗಿ ಉದ್ಯೋಗ ಹಿಡಿದ. ಐದು ವರ್ಷಗಳ ಕಾಲ ಈ ಕೆಲಸ ಮುಂದುವರಿಸಿ ಅನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಫ್ರೀಬರ್ಗ್‍ನಲ್ಲಿ ಆಗತಾನೇ ಸ್ಥಾಪನೆಗೊಂಡಿದ್ದ ಮೈನಿಂಗ್ ಅಕಾಡೆಮಿ ಯನ್ನು ಸೇರಿದ. ಅಲ್ಲಿಗೆ ಸಮೀಪದಲ್ಲಿಯ ಇತರ ಕಾರ್ಖಾನೆಗಳು ಹಾಗೂ ಗಣಿಗಳಿಗೆ ಭೇಟಿಕೊಟ್ಟು ಅಲ್ಲಿಯ ಕೆಲಸಕಾರ್ಯಗಳನ್ನೂ ವೀಕ್ಷಿಸುತ್ತಿದ್ದ. ಈ ಕಾಲದಲ್ಲಿ ಇವನು ಸಂಗ್ರಹಿಸಿದ ಖನಿಜಗಳು ಇಂದಿಗೂ ಮಹತ್ತ್ವದವೆನಿಸಿವೆ. ಆಗಿನ ಕಾಲಕ್ಕೆ ಪ್ರಖ್ಯಾತ ಖನಿಜ ವಿಜ್ಞಾನಿಯಾಗಿದ್ದು ಮೈನಿಂಗ್ ಅಕಾಡೆಮಿಯ ಖನಿಜಸಂಗ್ರಹಾಲ ಯದ ಮುಖ್ಯಾಧಿಕಾರಿ ಆಗಿದ್ದ ಓಹೈನ್ ಎಂಬವ ಇವನಿಗೆ ಸಾಕಷ್ಟು ಪ್ರೋತ್ಸಾಹ ನೀಡಿದ. ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿದ(1769) ಅನಂತರ ಈತ ಲೀಪ್‍ಜಿಗ್ ವಿಶ್ವವಿದ್ಯಾಲಯವನ್ನು ಸೇರಿದ. ಅಲ್ಲಿ ನ್ಯಾಯಶಾಸ್ತ್ರ, ಭಾಷಾಶಾಸ್ತ್ರ, ಇತಿಹಾಸ ಮತ್ತು ತತ್ತ್ವಶಾಸ್ತ್ರಗಳನ್ನು ಅಭ್ಯಾಸ ಮಾಡಿದನಾದರೂ ಖನಿಜ ವಿಜ್ಞಾನದ ಅಧ್ಯಯನವನ್ನು ಮಾತ್ರ ಮರೆಯಲಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಇದ್ದಾಗಲೆ ಈತ ರಚಿಸಿದ ಪುಸ್ತಕವೊಂದು ಪ್ರಕಟಣೆ ಕಂಡಿತು. ಈ ಗ್ರಂಥದಲ್ಲಿ ಖನಿಜಗಳ ಅಭ್ಯಾಸದಲ್ಲಿ ನೂತನ ಮಾರ್ಗವನ್ನು ವಿವೇಚಿಸಲಾಗಿತ್ತು. ಖನಿಜಶಾಸ್ತ್ರದ ಬಗೆಗೆ ಇವನಿಗಿದ್ದ ಆಸಕ್ತಿಯನ್ನು ಕಂಡು ಮೆಚ್ಚಿದ ವಿಶ್ವವಿದ್ಯಾಲಯ ಇವನನ್ನು ಗಣಿ ಲೋಹವಿದ್ಯೆ ವಿಭಾಗದ ಅಧ್ಯಾಪಕನನ್ನಾಗಿ ನೇಮಿಸಿತು. ಆಗ ಇವನ ವಯಸ್ಸು ಕೇವಲ  25 ವರ್ಷ. ಹೆಚ್ಚಿನ ಉತ್ಸಾಹದಿಂದ ಅಧ್ಯಾಪಕ ವೃತ್ತಿಯನ್ನು ಕೈಗೊಂಡು ವಿಶೇಷ ಗೌರವಕ್ಕೆ ಪಾತ್ರನಾದ. ವಿದ್ಯಾರ್ಥಿಗಳಲ್ಲಿ ವಿನೂತನ ಪ್ರವೃತ್ತಿ ಬೆಳೆಯುವು ದಕ್ಕೆ ಈತ ಬಹಳಷ್ಟು ಕಾರಣನಾದ.

	ಈತ ಸುಂದರಕಾಯದ ವ್ಯಕ್ತಿ. ಮೇಲಾಗಿ ಉಡಿಗೆ ತೊಡಿಗೆಗಳನ್ನೂ ಒಪ್ಪವಾಗಿ ಧರಿಸುತ್ತಿದ್ದ, ಮಾತ್ರವಲ್ಲದೆ ಸ್ನೇಹಪರನೂ ಉತ್ತಮ ವಾಗ್ಮಿಯೂ ಆಗಿದ್ದ. ತನ್ನ ಉಪನ್ಯಾಸಗಳಲ್ಲಿ ಖನಿಜಗಳ ಬಗ್ಗೆ ಶುಷ್ಕಗುಣ ವರ್ಣನೆಗಳನ್ನು ಮಾತ್ರ ನೀಡದೆ ಅವುಗಳ ಹಿಂದೆ ಹುದುಗಿದ್ದ ವಿಶಾಲ ಮೂಲತತ್ತ್ವಗಳ ವಿವೇಚನೆಯನ್ನೂ ನಡೆಸುತ್ತಿದ್ದ. ಖನಿಜಸಂಪತ್ತಿನ ಆಧಾರದಿಂದ ಒಂದು ದೇಶದ ಇತಿಹಾಸ, ಅಲ್ಲಿಯ ನಾಗರಿಕತೆ ಮುಂತಾದವುಗಳಲ್ಲಿ ಬದಲಾವಣೆ ಹೇಗೆ ಸಾಧ್ಯವಾಗುವುದೆಂಬುದನ್ನು ಯುಕ್ತ ಉದಾಹರಣೆಗಳ ಮೂಲಕ ವಿವರಿಸಿ ವಿದ್ಯಾರ್ಥಿಗಳ ಮೇಲೆ ವಿಶೇಷ ಪರಿಣಾಮ ಉಂಟುಮಾಡುವ ಸಾಮಥ್ರ್ಯ ಈತನಿಗಿತ್ತು.

	ಈತ ವಿಶ್ವವಿದ್ಯಾಲಯದ ಖನಿಜಭಾಗದಲ್ಲಿ ವಿವಿಧ ಖನಿಜಗಳ ಮತ್ತು ಶಿಲೆಗಳ ಸಂಗ್ರಹಣೆಯಲ್ಲೇ ತೃಪ್ತನಾಗದೆ ಅವುಗಳ ಗುಣವನ್ನು ವಿವರಿಸಿ, ವರ್ಗೀಕರಿಸಿ ಅವನ್ನು ಓರಣಪಡಿಸುತ್ತಿದ್ದ. ಇದಲ್ಲದೆ ಈತ ಅಲ್ಲಿ ಅತ್ಯುತ್ತಮ ಗ್ರಂಥಭಂಡಾರವೂ ಮೈದಳೆಯಲು ಕಾರಣನಾದ.

	ಈತ ತನ್ನ ಉಪನ್ಯಾಸಗಳಲ್ಲಿ ಭೂಭಾಗದ ಶಿಲೆಗಳು ಅವ್ಯವಸ್ಥಿತ ವಾಗಿ ಹರಡಿರದೆ ಸುವ್ಯವಸ್ಥಿತವಾದ ರೀತಿಯಲ್ಲಿ ಕಂಡುಬರುತ್ತವೆಂಬ ಅಂಶವನ್ನು ಒತ್ತಿಹೇಳಿದ್ದಾನೆ. ಅನೇಕ ಕಡೆ ವಿವಿಧ ಶಿಲೆಗಳು ಒಂದರ ಮೇಲೆ ಒಂದಿದ್ದು ನಿರ್ದಿಷ್ಟ ಪ್ರಸ್ತರೀರಚನೆಯನ್ನು ಪ್ರದರ್ಶಿಸುತ್ತವೆ. ಇವನ್ನು ನಾಲ್ಕು ಮೂಲಭೂತ ವರ್ಗಗಳಾಗಿ ವಿಂಗಡಿಸಬಹುದು: ಮರಳು, ಜೇಡಿಮಣ್ಣು ಇತ್ಯಾದಿಗಳ ಗುಂಪು: ಜ್ವಾಲಾಮುಖಿಗಳಿಂದ ಉಂಟಾಗುವ ಶಿಲೆಗಳ ಗುಂಪು:  ಸುಣ್ಣಶಿಲೆ, ಮರಳುಶಿಲೆ, ಕಲ್ಲಿದ್ದಲು, ಜಾಲ್, ಜಿಪ್ಸಮ್, ಜೇಡುಶಿಲೆ ಇತ್ಯಾದಿಗಳ ಗುಂಪು, ಗ್ರಾನೈಟ್, ನೈಸ್, ಸ್ಲೇಟ್, ಪಾರ್ಫರಿ, ಬೆಸಾಲ್ಟ್‍ಗಳ ಗುಂಪು. ಈ ನಾಲ್ಕೂ ಗುಂಪುಗಳು ಮೂಲ ಸಾಗರದ ತಳದಲ್ಲಿ ರೂಪಗೊಂಡಂಥವು ಎಂದು ವಾದಿಸಿದ. ತನ್ನವಾದಕ್ಕೆ ವ್ಯತಿರಿಕ್ತವಾಗಿ ದೊರೆತ ನೈಸರ್ಗಿಕ ಲಕ್ಷಣಗಳನ್ನು ಗಮನಿಸದೆ ತನ್ನ ವಾದವೇ ಸರಿಯೆಂದು ಸಾರಿದ. ಆಧುನಿಕ ಸಂಶೋಧನೆ ಗಳಿಂದ ಈ ವಾದಕ್ಕೆ ಪುಷ್ಟಿ ದೊರೆತಿಲ್ಲವಾದರೂ ಭೂವಿಜ್ಞಾನದ ಬೆಳೆವಣಿಗೆಯಲ್ಲಿ ಈತನ ಕೆಲಸ ಮಹತ್ತ್ವದ್ದೆಂಬುದಂತೂ ನಿಜ.

	ಈತ ಸ್ಯಾಕ್ಸನಿಯ ಡ್ರೆಸ್‍ಡನ್ನಿನಲ್ಲಿ 1817 ಜೂನ್ 30ರಂದು ನಿಧನನಾದ.	
	
		(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ